ಬೆಕೆಟ್, ಥಾಮಸ್ ಎ
1118-70. ಕ್ಯಾಂಟರ್ ಬರಿಯ ಬಿಷಪ್. ಇಂಗ್ಲೆಂಡಿನ ಧಾರ್ಮಿಕ ಚರಿತ್ರೆಯಲ್ಲಿ ಇವನ ಹೆಸರು ಪ್ರಸಿದ್ಧವಾಗಿದೆ. ಈತ ಲಂಡನ್ನಿನಲ್ಲಿ 1118ರ ಸುಮಾರಿಗೆ ಜನಿಸಿದ. ತಂದೆ ಒಬ್ಬ ಫ್ರೆಂಚ್ ವ್ಯಾಪಾರಗಾರನಾಗಿದ್ದ. ಬೆಕೆಟ್ ಕಾನೂನು ವ್ಯಾಸಂಗ ನಡೆಸಿದ. ಅನಂತರ ಕ್ಯಾಂಟ್‍ರ್ ಬರಿಯ ಆರ್ಚಬಿಷಪ್ ತಿಯೋಬಾಲ್ಡನ ಆಪ್ತ ಸೇವಕನಾದ. 1154ರಲ್ಲಿ ಈತ ಬಿಷಪನ ಕೆಳಗಣ ಅಧಿಕಾರಿಯಾಗಿ ನೇಮಿಸಲ್ಪಟ್ಟ. 1155ರಲ್ಲಿ ದೊರೆ ಎರಡನೆಯ ಹೆನ್ರಿ ಇವನನ್ನು ಇಂಗ್ಲೆಂಡಿನ ಪ್ರಧಾನ ನ್ಯಾಯಾಧೀಶನಾಗಿ ನೇಮಿಸಿದ. 1156-62ರ ತನಕ ದೊರೆಯ ಆಪ್ತ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ. ಈ ಅವಧಿಯಲ್ಲಿ ಫ್ರಾನ್ಸ್ ಜೊತೆಗಿನ ಯುದ್ಧದಲ್ಲಿ ರಾಜಕೀಯ ಮುತ್ಸದ್ದಿತನ ತೋರಿ 1160ರಲ್ಲಿ ಎರಡು ದೇಶಗಳ ನಡುವೆ ಶಾಂತಿ ಸ್ಥಾಪನೆಯಾಗಲು ನೆರವಾದ. 1162ರಲ್ಲಿ ಹೆನ್ರಿಯ ಕೋರಿಕೆಯಂತೆ ಕ್ಯಾಂಟರ್‍ಬರಿಯ ಆರ್ಚ್‍ಬಿಷಪ್ ಆದ. ಕಠಿಣ ನೀತಿಯನ್ನು ಪಾಲಿಸಿದ್ದರಿಂದ ದೊರೆಯ ಕೋಪಕ್ಕೆ ಪಕ್ಕಾದ. ರಾಜ ಧನವನ್ನು ಲಪಟಾಯಿಸಿದ ಆರೋಪವನ್ನು ಇವನ ಮೇಲೆ ಹೊರಿಸಲಾಯಿತು. ಆಗ ಈತ ಪೋಪ್ 3ನೆಯ ಅಲೆಕ್ಸಾಂಡರ್‍ಗೆ ಮನವಿಸಲ್ಲಿಸಿ ದೇಶ ತೊರೆದ.. ವಾದವಿವಾದ ಮುಗಿದ ಅನಂತರ ಬೆಕೆಟ್ ಇಂಗ್ಲೆಂಡಿಗೆ ಬರುವಂತೆ ದೊರೆ ಹೆನ್ರಿ 1170ರಲ್ಲಿ ಅನುಮತಿ ನೀಡಿದ. ಮತ್ತೆ ರಾಜ ಕೋಪಕ್ಕೆ ಗುರಿಯಾಗಿ ನಾಲ್ವರು ಯೋಧರಿಂದ ಕ್ಯಾಂಟರ್‍ಬರಿಯ ಕೆಥಡ್ರಲ್‍ನಲ್ಲಿ 1170 ಡಿಸೆಂಬರ್ 29ರಂದು ಕೊಲೆಯಾದ. 1173 ಫೆಬ್ರುವರಿ 21 ರಂದು ಪೋಪ್ ಅಲೆಕ್ಸಾಂಡರ್ ಇವನನ್ನು ಸಂತನೆಂದು ಘೋಷಿಸಿದ. ಇಂಗ್ಲೆಂಡಿನ ಕ್ಯಾಂಟರ್ ಬರಿಯ ಚರ್ಚಿನಲ್ಲಿ ಇವನ ಸ್ಮರಣೆಗಾಗಿ ಒಂದು ಸಣ್ಣ ಗುಡಿಯನ್ನು ನಿರ್ಮಿಸಲಾಗಿದೆ. ದೊರೆ ಎಂಟನೆಯ ಹೆನ್ರಿ ಈ ಸ್ಮಾರಖವನ್ನು ನಾಶಪಡಿಸಿದ. ಇದು ಉತ್ತರ ಯೂರೊಪಿನ ಯಾತ್ರಾಸ್ಥಳವಾಗಿ ಪ್ರಸಿದ್ಧವಾಗಿದೆ.      
(ಜಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ